ಬೆಳಗಾವಿ: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಆರಂಭಿಸಿದ ಬೆನ್ನಲ್ಲೇ ಮಂಡಳಿಯ ಸಿಇಒ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದ ತಮ್ಮ ನಿವಾಸದಲ್ಲಿ ಸಿಇಒ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಸಿಇಒ ಕೆ. ಆನಂದ್ (ಮೂಲತಃ ತಮಿಳುನಾಡು) ಕ್ಯಾಂಪ್ ಪ್ರದೇಶದ ಸರ್ಕಾರಿ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ(Chief Executive Officer - officer of Indian Defence Estates Service (IDES) cadre of Civil Services).
ಕಳೆದ ಒಂದೂವರೆ ವರ್ಷದಿಂದ ಕಂಟೋನ್ಮೆಂಟ್ ಬೋರ್ಡ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಬೆಳಗ್ಗೆ ಮನೆ ಬಾಗಿಲು ತೆರೆಯದ ಕಾರಣ ನೌಕರರು ಕಂಟೋನ್ಮೆಂಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸಿಇಒ ಮೃತಪಟ್ಟಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಎಂಎಲ್‌ಐಆರ್‌ಸಿ ಬ್ರಿಗೇಡಿಯರ್ ಹಾಗೂ ಖಡೇಬಜಾರ್ ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ನೇಮಕಾತಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆಸಿತ್ತು. ಅಕ್ರಮ ನೇಮಕಾತಿ ಮತ್ತು ಅಕ್ರಮ ಕಾಮಗಾರಿ ಕುರಿತು ಖಾಸಗಿ ದೂರುಗಳ ಆಧಾರದ ಮೇಲೆ ಸಿಬಿಐ ದಾಳಿ ನಡೆಸಿದೆ. ಕಳೆದ ನಾಲ್ಕೈದು ದಿನಗಳಿಂದ ತನಿಖೆ ನಡೆಯುತ್ತಿರುವಾಗಲೇ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
0 ಕಾಮೆಂಟ್‌ಗಳು