ಬೆಳಗಾವಿ: ಬೆಳಗಾವಿ ತಾಲೂಕಿನ ಶಿಂದೋಳಿ ಗ್ರಾಮದ ಮಸ್ನಾಯಿ ದೇವಸ್ಥಾನದ ಹಿಂಭಾಗದ ಬಾವಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಈ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೇವಸ್ಥಾನದಲ್ಲಿ ಚಿನ್ನಾಭರಣ ಕದ್ದ ಕಳ್ಳರು ಮಹಿಳೆಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಮನೆಯವರು ಆರೋಪಿಸಿದ್ದಾರೆ. ಮೃತ ಮಹಿಳೆಯನ್ನು ಭಾರತಿ ಪೂಜಾರಿ ( ಶಿಂದೋಳಿ, ವಯಸ್ಸು 48) ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಹಿಳೆ ಮನೆಯಲ್ಲಿದ್ದ ಪ್ರಾಣಿಗಳ ಸಗಣಿ ಎರಚಲು ಹೋಗಿದ್ದಳು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಮನೆ ಪಕ್ಕದ ಮಸ್ನಾಯಿ ದೇವಸ್ಥಾನದಲ್ಲೂ ಕಳ್ಳತನ ನಡೆದಿದೆ. ಕಳ್ಳರು ಕಳ್ಳತನ ಮಾಡುತ್ತಿರುವುದನ್ನು ಮಹಿಳೆ ನೋಡಿದ ಕಾರಣ, ವಿಷಯ ಹರಡದಂತೆ ಕಳ್ಳರು ಮಹಿಳೆಯನ್ನು ಬಾವಿಗೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಳಗ್ಗೆಯಾದರೂ ಮಹಿಳೆ ಮನೆಗೆ ಬಾರದಿರುವುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ದೇವಸ್ಥಾನದ ಮುಂಭಾಗದಲ್ಲಿ ದನದ ಸಗಣಿ ಮತ್ತು ಚಪ್ಪಲಿ ಕಾಣಿಸಿಕೊಂಡಿದ್ದರಿಂದ ಮಾರಿಹಾಳ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು. ತನಿಖೆಯ ವೇಳೆ ಬಾವಿಯೊಳಗೆ ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
0 ಕಾಮೆಂಟ್‌ಗಳು